ಕೊಆಟಿ

	ಕಾರ್ನಿವೊರ ಗಣದ ಪ್ರೋಸಿಯಾನಿಡೀ ಕುಟುಂಬಕ್ಕೆ ಸೇರಿದ ನಾಸುವ ಎಂಬ ಶಾಸ್ತ್ರೀಯ ಹೆಸರಿನ ಒಂದು ಜಾತಿಯ ಸಸ್ತನಿ. ಇದರಲ್ಲಿ ನಾ. ನಾಸುವ (ಉಂಗುರಬಾಲದ ಕೊಆಟಿ), ನಾ.ನೆಲ್ಸೋನಿ ಮತ್ತು ನಾ. ನಾರಿಕ ಎಂಬ ಮೂರು ಪ್ರಭೇದಗಳಿವೆ. ಇವುಗಳಲ್ಲಿ ಮೊದಲನೆಯದು ದಕ್ಷಿಣ ಅಮೆರಿಕದಲ್ಲೂ ಎರಡನೆಯದು ಮೆಕ್ಸಿಕೋ ಖಾರಿಯಲ್ಲಿನ ಕೊಸೂಮೆಲ್ ದ್ವೀಪಗಳಲ್ಲೂ ಮೂರನೆಯದು ದಕ್ಷಿಣ ಅಮೆರಿಕ ಮತ್ತು ಉತ್ತರ ಅಮೆರಿಕದ ದಕ್ಷಿಣ ಭಾಗದಲ್ಲೂ ಕಾಣಬರುತ್ತದೆ.       (ಎಸ್.ಎನ್.ಕೆಯು.)

	ಕೊಆಟಿ ರಕೂನ್‍ಗಳನ್ನು ಬಹುವಾಗಿ ಹೋಲುತ್ತದೆ. ಆದರೆ ಇದು ರಕೂನ್‍ಗಿಂತ ಹೆಚ್ಚು ಉದ್ದ ಮತ್ತು ಇದಕ್ಕೆ ಹಂದಿಗಿರುವಂಥ ಉದ್ದವಾಗಿ ಚಾಚಿರುವ ಮೂತಿಯಿದೆ. ಮೂತಿಯನ್ನು ಅತ್ತಿತ್ತ ಚಲಿಸಬಲ್ಲುದು. ಉದ್ದ ಹಾಗೂ ನೀಳವಾದ ದೇಹ, ದೇಹಕ್ಕಿಂತಲೂ ಉದ್ದವಾದ ಬಾಲ. ಉದ್ದವಾದ ಹಾಗೂ ಕತ್ತಿಯಂತೆ ಮೊನಚಾದ ಹಲ್ಲುಗಳು ಇದರ ವಿಶೇಷ ಲಕ್ಷಣಗಳು. ರಕೂನ್‍ನಲ್ಲಿರುವಂತೆಯೇ ಕೊಆಟಿಯ ಬಾಲದ ಮೇಲೂ ಬಿಳಿಯ ಬಣ್ಣದ ಉಂಗುರಗಳಿವೆ. ದೇಹದ ಬಣ್ಣ ಹಳದಿ, ಕಂದು, ಕೆಂಪು, ಕಪ್ಪು- ಹೀಗೆ ವೈವಿಧ್ಯಮಯ. ಕೊಆಟಿ ಓಡಾಡುವಾಗ ತನ್ನ ಬಾಲವನ್ನು ಮೇಲೆಕ್ಕೆತ್ತಿಕೊಂಡಿರುತ್ತದೆ. ಬಾಲದ ತುದಿ ಮಾತ್ರ ಕೊಂಚ ಬಾಗಿರುತ್ತದೆ.

	ಕೋಆಟಿ 5-12 ಪ್ರಾಣಿಗಳನ್ನೊಳಗೊಂಡ ಗುಂಪುಗಳಲ್ಲಿ ವಾಸಿಸುತ್ತದೆ. ಸಾಮಾನ್ಯವಾಗಿ ಒಂದು ಗುಂಪಿನಲ್ಲಿ ಹೆಣ್ಣುಗಳು ಮತ್ತು ಮರಿಗಳೆಲ್ಲ ಇರುತ್ತವೆ. ಬೆದೆಗಾಲದಲ್ಲಿ ಮಾತ್ರ ಗಂಡು ಕೊಆಟಿಗಳು ಗುಂಪಿಗೊಂದರಂತೆ ಸೇರಿಕೊಳ್ಳುತ್ತವೆ. ಬೇರಾವ ಗಂಡುಪ್ರಾಣಿಯನ್ನೂ ಸಹಿಸದ ಒಂದು ಗಂಡು ಹೆಣ್ಣುಗಳಿಗೆ ಮಾತ್ರ ವಿಧೇಯವಾಗಿರುತ್ತದೆ. ಕೊಆಟಿಯ ಆಹಾರ ವೈವಿಧ್ಯಮಯ. ಸಣ್ಣ ಹಕ್ಕಿಗಳು, ಹಲ್ಲಿಗಳು, ಕೀಟಗಳು, ಹಣ್ಣುಗಳು, ಡಿಂಬಗಳು ಇದರ ಪ್ರಧಾನ ಆಹಾರ. ತನ್ನ ಚೂಪಾದ ಮೂತಿಯಿಂದ ದಾರಿಯಲ್ಲಿ ಸಿಕ್ಕುವ ಎಲ್ಲ ಸಂದುಗಳನ್ನೂ ಕಲ್ಲು ಪೊಟರೆಗಳನ್ನೂ ಕೆದಕಿ ಆಹಾರವನ್ನು ಅರಸುತ್ತ ಸಾಗುತ್ತದೆ. ಕೊಆಟಿ ಬಲು ಚೆನ್ನಾಗಿ ಮರವನ್ನೂ ಹತ್ತಬಲ್ಲದು.

	ಕೊಆಟಿಯ ಸಂತಾನೋತ್ಪತ್ತಿಯ ಕಾಲ ವಸಂತ ಋತು. ಗರ್ಭಧರಿಸಿದ ಹಣ್ಣು ಕೊಆಟಿ ಗುಂಪಿನಿಂದ ಬೇರ್ಪಟ್ಟು ಯಾವುದಾದರೂ ಒಂದು ಮರದಲ್ಲಿ ಗೂಡು ಕಟ್ಟುತ್ತದೆ. ಸುಮಾರು 11 ವಾರಗಳ ಗರ್ಭಧಾರಣೆಯ ಅವಧಿಯ ಅನಂತರ 2-6 ಮರಿಗಳನ್ನು ಈಯುತ್ತದೆ. ಸುಮಾರು 1 ತಿಂಗಳ ಕಾಲ ಮರಿಗಳನ್ನು ಏಕಾಂತದಲ್ಲಿಯೆ ಸಾಕಿದ್ದು ಅನಂತರ ಮರಿಗಳೊಂದಿಗೆ ಗುಂಪಿಗೆ ಮರಳಿ ಬರುತ್ತದೆ.

	ಮೆಕ್ಸಿಕೋದ ಮೂಲವಾಸಿಗಳು ಕೊಆಟಿಯನ್ನು ಮಾಂಸಕ್ಕಾಗಿ ಬೇಟೆಯಾಡುತ್ತಾರೆ. ನಾಯಿಗಳನ್ನು ಇದರ ಬೇಟೆಗೆಂದೇ ಸಾಕುವುದುಂಟು. ಹೀಗೆ ನಾಯಿಗಳಿಂದ ಸುತ್ತುವರಿದಾಗ ಕೊಆಟಿ ಉಗ್ರವಾಗಿ ಹೋರಾಡುತ್ತದೆ. ಅಲ್ಲದೆ ತನ್ನ ಚೂಪಾದ ಕೋರೆ ಹಲ್ಲುಗಳಿಂದ ತೀವ್ರವಾದ ಗಾಯಮಾಡುವುದುಂಟು. ಕೆಲವೆಡೆ ಕೊಆಟಿಯನ್ನು ಪಳಗಿಸಿ ಸಾಕುವುದುಂಟು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ